Ad
GREEN VALLEY INTERNATIONAL SCHOOL
ರಾಜ್ಯ

ಅಂಜುಮನ್ ಏ ಇಸ್ಲಾಂ ಕಮಿಟಿಯ ಮೂಲ ಉದ್ದೇಶ ಮಾನವ ಹಕ್ಕುಗಳ ರಕ್ಷಣೆ ಮತ್ತು ಶೈಕ್ಷಣಿಕ ಪ್ರಗತಿ: ಮಹೇಬೂಬ ಮುಲ್ಲಾ

ಅಂಜುಮನ್ ಏ ಇಸ್ಲಾಂ ಕಮಿಟಿಯನ್ನು ಹಿರಿಯರು ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಸ್ಥಾಪಿಸಿದ್ದರು. ಆದರೆ ಹಲವು ವರ್ಷಗಳ ಕಾಲ ಕಮಿಟಿ ರಚನೆಯಾಗದೆ ಸಂಸ್ಥೆಯ ಅಭಿವೃದ್ಧಿಗೆ ಹಿನ್ನಡೆಯಾಗಿದೆ. 2018ರಲ್ಲಿ ಕಮಿಟಿ ರಚನೆಯಾದರೂ, 2021ರ ಬಳಿಕ ಮತ್ತೆ ಆಡಳಿತಾತ್ಮಕ ಸಮಸ್ಯೆಗಳಿಂದ ಸಂಸ್ಥೆಯ ಪ್ರಗತಿ ಕುಂಠಿತವಾಯಿತು. ಈ ಹಿನ್ನೆಲೆಯಲ್ಲಿ ಅಂಜುಮನ್ ಹಿತರಕ್ಷಣಾ ಸಮಿತಿ ಮೂರು ವರ್ಷಗಳ ಕಾಲ ಹೋರಾಟ ನಡೆಸಿ ಚುನಾವಣೆ ನಡೆಯುವಂತೆ ಮಾಡಿತು. ಚುನಾವಣೆ ನಡೆದಿದ್ದರೂ, ಕೆಲವು ಅಭ್ಯರ್ಥಿಗಳ ಸ್ಪರ್ಧೆ ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಎರಡು ಪ್ರಕರಣಗಳು ನ್ಯಾಯಾಲಯದಲ್ಲಿರುವುದರಿಂದ ಚುನಾಯಿತ ಅಭ್ಯರ್ಥಿಗಳಿಗೆ ಇನ್ನೂ ಪ್ರಮಾಣಪತ್ರ ದೊರೆತಿಲ್ಲ. ಈ ಪ್ರಕರಣಗಳ ಅಂತಿಮ ತೀರ್ಪಿಗೆ ಒಳಪಟ್ಟೇ ಚುನಾವಣಾ ಫಲಿತಾಂಶ ಮಾನ್ಯವಾಗಲಿದೆ ಎಂದು ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಸಂಸ್ಥೆಯ ಅಭಿವೃದ್ಧಿಗೆ ಭಿನ್ನಾಭಿಪ್ರಾಯಗಳು ಮತ್ತು ವೈಯಕ್ತಿಕ ಹಿತಾಸಕ್ತಿಗಳು ಅಡ್ಡಿಯಾಗಬಾರದು. “ನಾನು” ಎನ್ನುವ ಮನೋಭಾವ ಬಿಟ್ಟು “ನಾವು” ಎನ್ನುವ ಮನೋಭಾವದಿಂದ ಸಮುದಾಯದ ಹಿತಕ್ಕಾಗಿ ಕೆಲಸ ಮಾಡಬೇಕು ಎಂದು ಮಹೇಬೂಬ ಮುಲ್ಲಾ ಕರೆ ನೀಡಿದ್ದಾರೆ. ಸುಮಾರು ಮೂರು ದಶಕಗಳ ನಿರ್ಲಕ್ಷ್ಯದಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಿನ್ನಡೆಯಾಗಿದೆ. ಆದ್ದರಿಂದ ಅಂಜುಮನ್ ಸಂಸ್ಥೆಯನ್ನು ಉಳಿಸಿ, ಶೈಕ್ಷಣಿಕವಾಗಿ ಸಮುದಾಯವನ್ನು ಮುನ್ನಡೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಂಸ್ಥೆಯ ಭವಿಷ್ಯ ಉಳಿಸುವುದೇ ಮುಂದಿನ ಪೀಳಿಗೆಯ ಭವಿಷ್ಯವನ್ನು ರಕ್ಷಿಸುವುದಾಗಿದೆ ಎಂಬುದು ವರದಿಯ ಪ್ರಮುಖ ಸಂದೇಶವಾಗಿದೆ.

ನಮಸ್ತೆ ಕರ್ನಾಟಕ ಡೆಸ್ಕ್
14 ದಿನಗಳ ಹಿಂದೆ · 45 views
Ad
https://cdn.phototourl.com/free/2026-08-28-22d04d2f-c690-46d3-8a0d-161e4b1f60b4.jpg
ಮುದ್ದೇಬಿಹಾಳ, ಆಗಸ್ಟ್ 24: ಅಂಜುಮನ್ ಏ ಇಸ್ಲಾಂ ಕಮಿಟಿಯನ್ನು ಸಮುದಾಯದ ಬಾಂಧವರ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಹಿರಿಯರು ಮನೆ-ಮನೆಗೆ ತೆರಳಿ ಸಂಘಟಿಸಿ ಸ್ಥಾಪಿಸಿದ್ದರು. ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಕಲ್ಪಿಸಿ, ಶಿಕ್ಷಿತ ಮತ್ತು ಪ್ರಗತಿಪರ ಸಮುದಾಯ ನಿರ್ಮಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿತ್ತು ಎಂದು ಟಾಪ್ ಇನ್ ಟೌನ ಮಹೇಬೂಬ ಮುಲ್ಲಾ ಹೇಳಿದರು. ಆದರೆ ಕಳೆದ ಹಲವು ವರ್ಷಗಳಿಂದ ಸಂಸ್ಥೆಯ ಶೈಕ್ಷಣಿಕ ಕ್ಷೇತ್ರದ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ನಡೆಯದೆ ಇರುವುದರಿಂದ ಹಿರಿಯರ ಕನಸಿಗೆ ಧಕ್ಕೆಯಾಗಿದೆ. ಸುಮಾರು ಮೂರು ದಶಕಗಳ ಕಾಲ ಸಂಸ್ಥೆಯ ಕಡೆಗಣನೆಯಿಂದ ಸಾವಿರಾರು ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಆರ್ಥಿಕ ಸಂಕಷ್ಟಗಳನ್ನು ಎದುರಿಸುವಂತಾಗಿದೆ ಎಂದು ಅವರು ವಿಷಾದಿಸಿದರು. ಬಹು ನಿರೀಕ್ಷೆಯ ಚುನಾವಣಾ ಪ್ರಕ್ರಿಯೆಯ ಬಳಿಕ 2018ರಲ್ಲಿ ಕಮಿಟಿ ರಚನೆಯಾದಾಗ ಸಮುದಾಯದಲ್ಲಿ ಹೊಸ ಆಶಾಭಾವನೆ ಮೂಡಿತ್ತು. ಯುವಕರು ಅಧಿಕಾರ ವಹಿಸಿಕೊಂಡಿದ್ದು, ಸಂಸ್ಥೆ ಅಭಿವೃದ್ಧಿಯ ಹೊಸ ಹಂತಕ್ಕೆ ಸಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ 2021ರಲ್ಲಿ ಮತ್ತೆ ಕಮಿಟಿ ರಚನೆಯಾಗಬೇಕಿದ್ದರೂ ಪ್ರಕ್ರಿಯೆ ವಿಳಂಬವಾಗಿ ಸಂಸ್ಥೆ ಮತ್ತೊಮ್ಮೆ ಅನಾಥ ಸ್ಥಿತಿಗೆ ತಲುಪಿತು. ಈ ಹಿನ್ನೆಲೆಯಲ್ಲಿ ಅಂಜುಮನ್ ಹಿತರಕ್ಷಣಾ ಸಮಿತಿಯನ್ನು ಸ್ಥಾಪಿಸಿ ಮೂರು ವರ್ಷಗಳ ಕಾಲ ಹೋರಾಟ ನಡೆಸಲಾಯಿತು. ಅದರ ಪರಿಣಾಮವಾಗಿ ಚುನಾವಣೆ ನಡೆಯುವ ಮೂಲಕ ಸಮುದಾಯಕ್ಕೆ ಮತ್ತೊಂದು ಅವಕಾಶ ದೊರಕಿದೆ. ಆದರೆ ಚುನಾವಣೆ ಪೂರ್ಣಗೊಂಡಿದ್ದರೂ ಕೆಲವು ನ್ಯಾಯಾಲಯದ ಪ್ರಕರಣಗಳ ಹಿನ್ನೆಲೆಯಲ್ಲಿ ಚುನಾಯಿತ ಅಭ್ಯರ್ಥಿಗಳಿಗೆ ಇನ್ನೂ ಪ್ರಮಾಣಪತ್ರ ದೊರೆತಿಲ್ಲ. ನಾಲ್ವರು ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದು, ತಾತ್ಕಾಲಿಕವಾಗಿ ಸ್ಪರ್ಧಿಸಲು ಮಾನ್ಯತೆ ದೊರೆತಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 27ರಂದು ನಡೆಯಲಿದೆ. ಮತ್ತೊಂದು ತಂಡ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ನ್ಯಾಯಾಲಯದ ಮೊರೆ ಹೋಗಿದೆ. ಈ ಎರಡೂ ಪ್ರಕರಣಗಳ ಅಂತಿಮ ತೀರ್ಪಿನ ನಂತರವೇ ಚುನಾವಣಾ ಫಲಿತಾಂಶದ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಡಾ. ಔದ್ರಾಮ ಅವರು ಫಲಿತಾಂಶದ ಕೊನೆಯ ಪುಟದಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರ ಪ್ರಕಾರ, “ಈ ಫಲಿತಾಂಶವು ಮಾನ್ಯ ಉಚ್ಚ ನ್ಯಾಯಾಲಯ, ಕಲಬುರಗಿ ಪೀಠದ WP No.203252/2026 ಮತ್ತು WP No.203262/2026 ರ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.” ಸಂಸ್ಥೆಯ ವಿಚಾರದಲ್ಲಿ ಸಮುದಾಯದಲ್ಲಿ ನಿರಂತರ ಭಿನ್ನಾಭಿಪ್ರಾಯಗಳು ಉಂಟಾಗುತ್ತಿದ್ದರೆ ಅಭಿವೃದ್ಧಿ ಸಾಧ್ಯವೇ ಎಂಬ ಪ್ರಶ್ನೆ ನಮ್ಮೆಲ್ಲರ ಮುಂದಿದೆ. ಸಂಸ್ಥೆಯ ಭವಿಷ್ಯವನ್ನು ಬದಲಿಸುವ ಬದಲು ಸಂಸ್ಥೆಯನ್ನು ಬಳಸಿಕೊಂಡು ತಮ್ಮ ವೈಯಕ್ತಿಕ ಭವಿಷ್ಯ ಬದಲಿಸಿಕೊಳ್ಳುವ ಮನೋಭಾವ ಬೆಳೆದುಬರಬಾರದು ಎಂದು ಮಹೇಬೂಬ ಮುಲ್ಲಾ ಅಭಿಪ್ರಾಯಪಟ್ಟರು. “ನಾನು” ಎನ್ನುವುದಕ್ಕಿಂತ “ನಾವು” ಎನ್ನುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಮುದಾಯದ ಏಳಿಗೆ ಸಾಧ್ಯ. ಸಂಸ್ಥೆಯು ಯಾವುದೇ ವ್ಯಕ್ತಿಯ ಸ್ವಾರ್ಥಕ್ಕಾಗಿ ಅಲ್ಲ; ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಸುಮಾರು ಮೂರು ದಶಕಗಳ ಕಾಲ ಸಂಸ್ಥೆಯ ಕಡೆಗಣನೆಯ ಪರಿಣಾಮವಾಗಿ ಸುಮಾರು 15 ಸಾವಿರ ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ನೋವು ನಮ್ಮೆಲ್ಲರನ್ನೂ ಕಾಡಬೇಕು. ಸಮುದಾಯದ ಸಂಪತ್ತು ಮತ್ತು ಸಂಸ್ಥೆಯ ಭವಿಷ್ಯದ ಬಗ್ಗೆ ನಾವು ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು.“ನಾವು ಅಲ್ಲಾಹನ ಮುಂದೆ ಇದಕ್ಕೆ ಹೇಗೆ ಉತ್ತರ ನೀಡುತ್ತೇವೆ?” ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ತಮ್ಮೊಳಗೆ ಕೇಳಿಕೊಳ್ಳಬೇಕು ಎಂದರು. ಅಂಜುಮನ್ ಏ ಇಸ್ಲಾಂ ಕಮಿಟಿಯ ಭವಿಷ್ಯವನ್ನು ಉಳಿಸುವುದು ಎಂದರೆ ಕೇವಲ ಒಂದು ಸಂಸ್ಥೆಯನ್ನು ಉಳಿಸುವುದಲ್ಲ; ಅದರ ಮೂಲಕ ಮುಂದಿನ ಪೀಳಿಗೆಯ ಭವಿಷ್ಯವನ್ನು ರಕ್ಷಿಸುವುದಾಗಿದೆ. ಸಮುದಾಯ ಶೈಕ್ಷಣಿಕವಾಗಿ ಮುಂದೆ ಬಂದಾಗ ಮಾತ್ರ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಬಲಿಷ್ಠವಾಗಲು ಸಾಧ್ಯ. ಆದ್ದರಿಂದ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಸಮುದಾಯದ ಹಿತ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ಕೇಂದ್ರವಾಗಿಸಿಕೊಂಡು ಸಂಸ್ಥೆಯ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಮಹೇಬೂಬ ಮುಲ್ಲಾ ಮನವಿ ಮಾಡಿದರು.
Ad
ಸಂಪಾದಕರು

ಕಾಮೆಂಟ್‌ಗಳು (0)

ಕಾಮೆಂಟ್ ಮಾಡಲು ಲಾಗಿನ್ ಮಾಡಿ.

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!