Ad
GREEN VALLEY INTERNATIONAL SCHOOL
ರಾಜ್ಯ

ವಿದ್ಯಾರ್ಥಿಗಳಿಗೆ ಭೊದಿಸಿದ ಸಂಸ್ಕಾರ ಜೀವನದುದ್ದಕ್ಕೂ ಮಾರ್ಗದರ್ಶಿ: ಶಿಕ್ಷಕ ನಜೀರ್ ಮಮ್ದಾಪುರ

ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕದ ಜ್ಞಾನ ನೀಡುವುದಲ್ಲ; ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ನ್ಯಾಯ, ಸತ್ಯ, ಮಾನವೀಯತೆ, ಸಹೋದರತ್ವ ಹಾಗೂ ಸಾಮಾಜಿಕ ಜವಾಬ್ದಾರಿಯಂತಹ ಮೌಲ್ಯಗಳನ್ನು ಬೆಳೆಸುವುದೇ ನಿಜವಾದ ಶಿಕ್ಷಣ ಎಂದು ಶಿಕ್ಷಕ ನಜೀರ್ ಮಮ್ದಾಪುರ ಹೇಳಿದರು. ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.

ನಮಸ್ತೆ ಕರ್ನಾಟಕ ಡೆಸ್ಕ್
2 ದಿನಗಳ ಹಿಂದೆ · 127 views
Ad
https://cdn.phototourl.com/free/2026-08-28-22d04d2f-c690-46d3-8a0d-161e4b1f60b4.jpg
ಮುದ್ದೇಬಿಹಾಳ, ಸೆ. 05: ಶಿಕ್ಷಣವು ಮನುಷ್ಯನ ಬದುಕಿಗೆ ದಿಕ್ಕು ತೋರಿಸುವ ಪ್ರಮುಖ ಸಾಧನವಾಗಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡುವ ಸಂಸ್ಕಾರ ಮತ್ತು ಜೀವನ ಮೌಲ್ಯಗಳು ಅವರ ಜೀವನದುದ್ದಕ್ಕೂ ಮಾರ್ಗದರ್ಶಕವಾಗುತ್ತವೆ ಎಂದು ಶಿಕ್ಷಕ ನಜೀರ್ ಮಮ್ದಾಪುರ ಹೇಳಿದರು. ವಿಶೇಷ ದಿನದ ಅಂಗವಾಗಿ ಮಾತನಾಡಿದ ಅವರು, ಪವಿತ್ರ ಕುರಾನ್‌ನಲ್ಲಿ ಮಾನವಕುಲಕ್ಕೆ ಅನುಗ್ರಹವಾದ ಮೊದಲ ಪದ ‘ಇಕ್ರಾ’, ಅಂದರೆ ‘ಓದಿರಿ’ ಎಂಬ ಸಂದೇಶವಾಗಿದೆ. ಓದುವಿಕೆ ಮನುಷ್ಯನ ಜ್ಞಾನವನ್ನು ವಿಸ್ತರಿಸುವುದರ ಜೊತೆಗೆ ಆತನ ಚಿಂತನೆ, ವ್ಯಕ್ತಿತ್ವ ಮತ್ತು ಬದುಕಿನ ದೃಷ್ಟಿಕೋನವನ್ನೂ ರೂಪಿಸುತ್ತದೆ ಎಂದು ಹೇಳಿದರು. ನಮ್ಮ ದೈನಂದಿನ ಬದುಕಿನಲ್ಲಿ ಹಿರಿಯರು ಹಾಗೂ ಕಿರಿಯರು ಎದುರಿಸುವ ಹಲವು ಘಟನೆಗಳನ್ನು ಗಮನಿಸಿದಾಗ, ಬಾಲ್ಯದಲ್ಲಿ ನಮ್ಮ ಶಿಕ್ಷಕರು ನೀಡಿದ ಬೋಧನೆಗಳು ನೆನಪಿಗೆ ಬರುತ್ತವೆ. ಅಂದು ಶಿಕ್ಷಕರು ಹೇಳಿದ ಹಲವು ವಿಚಾರಗಳನ್ನು ಇಂದು ನಾವು ನಮ್ಮ ಜೀವನದಲ್ಲಿ ಕಣ್ಣಾರೆ ಕಾಣುತ್ತಿದ್ದೇವೆ. ಇದರಿಂದ ಶಿಕ್ಷಕರ ಮಾರ್ಗದರ್ಶನದ ಮಹತ್ವ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದರು. ಒಬ್ಬ ಶಿಕ್ಷಕ ತನ್ನ ವೃತ್ತಿ ಜೀವನದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜೊತೆಗೆ ಸಾಮಾಜಿಕ ಬದುಕಿನ ಜ್ಞಾನವನ್ನೂ ನೀಡುತ್ತಾನೆ. ಸಮಾಜದಲ್ಲಿ ಹೇಗೆ ಬದುಕಬೇಕು, ಸರ್ಕಾರದ ಅಧೀನದಲ್ಲಿ ಕರ್ತವ್ಯ ನಿರ್ವಹಿಸುವಾಗ ಪ್ರಾಮಾಣಿಕತೆ ಹಾಗೂ ನಿಷ್ಠೆಯನ್ನು ಹೇಗೆ ಕಾಪಾಡಿಕೊಳ್ಳಬೇಕು, ನ್ಯಾಯ, ಸತ್ಯ ಮತ್ತು ಜೀವನದ ತತ್ವಗಳನ್ನು ಯಾವ ಸಂದರ್ಭದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ನಜೀರ್ ಮಮ್ದಾಪುರ ತಿಳಿಸಿದರು. ಅದೇ ರೀತಿ ಸಮಾಜದಲ್ಲಿ ಸಹೋದರತ್ವ, ಭಾವೈಕ್ಯತೆ, ಮಾನವೀಯತೆ ಮತ್ತು ಪರಸ್ಪರ ಗೌರವ‌ದ ಭಾವನೆಗಳನ್ನು ಬೆಳೆಸುವಲ್ಲಿಯೂ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಣದ ಮೂಲಕ ಉತ್ತಮ ವ್ಯಕ್ತಿತ್ವಗಳನ್ನು ರೂಪಿಸುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು. ಒಬ್ಬ ಕಲಾವಿದ ಸಾಮಾನ್ಯವಾದ ಬಂಡೆಯನ್ನು ತನ್ನ ಕಲಾತ್ಮಕ ಕೆತ್ತನೆಯ ಮೂಲಕ ಸುಂದರ ರೂಪಕ್ಕೆ ತಂದು ಅದನ್ನು ಪೂಜಿಸುವಂತಹ ಮಟ್ಟಕ್ಕೆ ಸಿದ್ಧಪಡಿಸುವಂತೆ, ಒಬ್ಬ ಶಿಕ್ಷಕನು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಗುರುತಿಸಿ, ನಿರಂತರ ಮಾರ್ಗದರ್ಶನ ಮತ್ತು ತಿದ್ದುವಿಕೆಯ ಮೂಲಕ ಅವರನ್ನು ಸಮಾಜದ ಮಾದರಿ ವ್ಯಕ್ತಿಗಳನ್ನಾಗಿ ರೂಪಿಸುತ್ತಾನೆ ಎಂದು ಅವರು ಮನಮುಟ್ಟುವ ರೀತಿಯಲ್ಲಿ ವಿವರಿಸಿದರು. ಹೀಗಾಗಿ ಶಿಕ್ಷಕರು ಕೇವಲ ಪಾಠ ಬೋಧಿಸುವ ವ್ಯಕ್ತಿಗಳಲ್ಲ. ಅವರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳು ಹಾಗೂ ಸಮಾಜ ನಿರ್ಮಾಣದ ಪ್ರಮುಖ ರೂವಾರಿಗಳು. ಶಿಕ್ಷಕರಿಂದ ಪಡೆದ ಜ್ಞಾನ ಮತ್ತು ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡ ವಿದ್ಯಾರ್ಥಿಗಳು ಮುಂದೆ ಉತ್ತಮ ನಾಗರಿಕರಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ನಜೀರ್ ಮಮ್ದಾಪುರ ಸಂದೇಶ ನೀಡಿದರು.
Ad
ಸಂಪಾದಕರು

ಕಾಮೆಂಟ್‌ಗಳು (0)

ಕಾಮೆಂಟ್ ಮಾಡಲು ಲಾಗಿನ್ ಮಾಡಿ.

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!